ಪೆರಿಯಾರ್
ದಕ್ಷಿಣ ಭಾರತದ ಕೇರಳ ರಾಜ್ಯದಲ್ಲಿರುವ ಒಂದು ನದಿ.  ಅದೇ ಹೆಸರಿನ ಸರೋವರವೂ ಇದೆ.  ನದಿಯ ಉದ್ದ ಸುಮಾರು 225 ಕಿ.ಮೀ.  ಇದು ತಮಿಳುನಾಡು ಮತ್ತು ಕೇರಳ ರಾಜ್ಯಗಳ ನಡುವಣ ಗಡಿಯ ಬಳಿಯ ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.  ಈ ನದಿಯ ಕೊನೆಯ 96 ಕಿ.ಮೀ. ಉದ್ದದ ಭಾಗ ಮಾತ್ರ ದೋಣಿಗಳ ಸಂಚಾರಕ್ಕೆ ಯೋಗ್ಯವಾಗಿದೆ.  ಕೋಟ್ಟಯಂ ಜಿಲ್ಲೆಯಲ್ಲಿ 1895 ರಲ್ಲಿ ಈ ನದಿಗೆ ಕಟ್ಟೆಯನ್ನು ಕಟ್ಟಿ 31ಚ.ಕಿ.ಮೀ. ವಿಸ್ತೀರ್ಣದ ಪೆರಿಯಾರ್ ಸರೋವರವನ್ನು ನಿರ್ಮಿಸಲಾಗಿದೆ.  ಈ ಕೃತಕ ಸರೋವರ ಸಮುದ್ರ ಮಟ್ಟಕ್ಕೆ 850 ಮೀ. ಎತ್ತರದಲ್ಲಿ ಬೆಟ್ಟಗುಡ್ಡಗಳ ನಡುವೆ ಹರಡಿದೆ.  ಇದರ ಸುತ್ತಲೂ ವನ್ಯಮೃಗಗಳ ಅಭಯಾರಣ್ಯವಿದೆ.  ಈ ಸರೋವರದ ನೀರನ್ನು 1.6 ಕಿ.ಮೀ.ಗೂ ಉದ್ದವಾದ ಸುರಂಗದ ಮೂಲಕ ಬೆಟ್ಟಗಳ ಆಚೆಗೆ ಪೂರ್ವಾಭಿಮುಖವಾಗಿ ಒಯ್ದು ತಮಿಳುನಾಡಿನಲ್ಲಿ ವೈಗೈ ನದಿಗೆ ಸೇರಿಸಲಾಗಿದೆ.  ಈ ನೀರನ್ನು ಮಧುರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರಾವರಿಗೆ ಉಪಯೋಗಿಸಲಾಗುತ್ತಿದೆ.  1958 ರಲ್ಲಿ ಸರೋವರದ ನೀರಿನಿಂದ 1,05,000 ಕಿಲೋವಾಟ್ ವಿದ್ಯತ್ತನ್ನು ತಯಾರಿಸುವ ಯೋಜನೆಯನ್ನು ಪ್ರಾರಂಭಿಸಲಾಯಿತು.  ಪೆರಿಯಾರ್ ಸರೋವರದ ವರೆಗೆ ಉತ್ತರಾಭಿಮುಖವಾಗಿ ಹರಿಯುವ ನದಿ ಅಲ್ಲಿಂದ ಮುಂದೆ ಬೆಟ್ಟಗಳ ಮೂಲಕ ಸ್ಥೂಲವಾಗಿ ವಾಯುವ್ಯ ದಿಕ್ಕಿಗೆ ಹರಿದು ಬಯಲು ಪ್ರದೇಶದಲ್ಲಿ ಸಾಗಿ ಕೊಚ್ಚಿಯ ಸಮೀಪದ ಆಳ್ವಾಯಿಯ ಮೂಲಕ ಹರಿದು ಪರೂರಿನಲ್ಲಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.
(ಜೆ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ